ಕ್ಷೇತ್ರಕಾರ್ಯ (ಜಾನಪದ)

ಸ್ಥಳಕ್ಕೇ ಹೋಗಿ ಜಾನಪದ ಮೂಲವಸ್ತುಗಳನ್ನು ವ್ಯವಸ್ಥಿತ ವಿಧಾನಗಳ ಮೂಲಕ ಸಂಗ್ರಹಿಸುವ ಕೆಲಸ ಹೇಗೆ ಇರಬೇಕೆಂಬ ಬಗ್ಗೆ ಮುಖ್ಯ ವಿವರಗಳನ್ನು ಇಲ್ಲಿ ಕೊಡಲಾಗಿದೆ. [ಫೀಲ್ಡ್ ವರ್ಕ್ (ಫೋಕ್‍ಲೋರ್)]. ಕ್ಷೇತ್ರಕಾರ್ಯ ಜಾನಪದಕ್ಕೇ ಮೀಸಲಾದ ವಿಧಾನವೇನಲ್ಲ. ಇದನ್ನು ಮಾನವಶಾಸ್ತ್ರ, ಸಮಾಜಶಾಸ್ತ್ರ, ಭಾಷಾವಿಜ್ಞಾನ, ಸಂಸ್ಕøತಿ ಅಧ್ಯಯನ ಮುಂತಾದ ಕ್ಷೇತ್ರಗಳಲ್ಲಿ ಆಗಲೆ ಬಳಸುತ್ತಿದ್ದಾರೆ. ಇದರಿಂದಾಗಿ ಎಲ್ಲ ಶಾಸ್ತ್ರಗಳಿಗೂ ಹೊಂದಬಲ್ಲ ಕ್ಷೇತ್ರಕಾರ್ಯದ ನಿಯಮಗಳು ಕೆಲವಿದೆ. (ನೋಡಿ- ಕ್ಷೇತ್ರಕಾರ್ಯ) ಅವುಗಳ ಜೊತೆಗೆ ಜಾನಪದಕ್ಕೇ ಸಂಬಂಧಿಸಿದಂತೆ ವಿಶಿಷ್ಟವಾದ ನಿಯಮಗಳೂ ಕೆಲವಿದೆ. ಅವನ್ನು ಇಲ್ಲಿ ಪರಿಶೀಲಿಸಲಾಗಿದೆ. ನೇರವಾದ ಕ್ಷೇತ್ರಪರಿವೀಕ್ಷಣೆಯಿಂದ ಸಂಗ್ರಹಿಸಿದುದನ್ನು ಯಾವುದಾದರೂ ರೂಪದಲ್ಲಿ ಪ್ರಕಟಪಡಿಸುವುದೇ ಕ್ಷೇತ್ರಕಾರ್ಯದ ಉದ್ದೇಶವಾದ್ದರಿಂದ ಜಾನಪದ ಅಧ್ಯಯನಕ್ಕೆಲ್ಲ ಇಂಥ ಸಂಗ್ರಹಕಾರ್ಯವೇ ಮೊದಲ ಹಂತ. ಸಂಗ್ರಹ, ಸಂಪಾದನೆ, ವಿಶ್ಲೇಷಣೆಗಳು ಜಾನಪದ ವಿದ್ವಾಂಸರ ಗುರಿಗಳು. ಸ್ಟಿತ್ ಥಾಂಸನ್ ಹೇಳುವ ಹಾಗೆ, ಜಾನಪದ ಅಧ್ಯಯನವೆಲ್ಲದರ ಸಾರವೆಂದರೆ-ಸಂಗ್ರಹಿತವಾಗಿರುವುದನ್ನು ಸಂಗ್ರಹಿಸುವುದು ಮತ್ತು ಅದನ್ನು ಅರಿತುಕೊಳ್ಳಲು ಪ್ರಯತ್ನಿಸುವುದು. ಜನತೆಯ ಜೀವನಾನುಭವ ಈಗಾಗಲೆ ಜಾನಪದದಲ್ಲಿ ಹರಳುಗೊಂಡಿರುತ್ತದಾಗಿ, ಅದನ್ನು ಮತ್ತೆ ಒಂದು ಕಡೆ ಸಂಗ್ರಹಿಸಿ ಅಧ್ಯಯನ ಮಾಡಬೇಕೆಂಬುದೇ ಇದರ ಅರ್ಥ. ಇದೆಲ್ಲವೂ ಸಂಪೂರ್ಣವಾಗಿ ಕ್ಷೇತ್ರಕಾರ್ಯವನ್ನು ಅವಲಂಬಿಸಿರುತ್ತದೆ. ಆದ್ದರಿಂದ ಜಾನಪದ ಅಧ್ಯಯನಕ್ಕೆ ಕ್ಷೇತ್ರಕಾರ್ಯ ತುಂಬ ಅವಶ್ಯವಾದುದು. ಜಾನಪದ ವಿದ್ವಾಂಸ ಕ್ಷೇತ್ರಕಾರ್ಯ ಅಪಾರ ಅನುಭವ ಪಡೆದವನಾಗಿರಬೇಕು; ಶ್ರೇಷ್ಠ ಸಂಗ್ರಹಕಾರನೂ ಸಂಗ್ರಹಿಸಲಿರುವ ಸಂಸ್ಕøತಿಯ ವಿಸ್ತಾರ ಜ್ಞಾನವನ್ನು ಪಡೆದ ವಿದ್ವಾಂಸನೂ ಆಗಿರಬೇಕು. ಇನ್ನೊಂದು ವಿಷಯವೆಂದರೆ, ಸಂಗ್ರಹಿಸಿರುವುದರ ಮೇಲೆಯೇ ನಿರ್ಣಾಯಕ ವಿಚಾರಗಳನ್ನು ಮುಂದೆ ಕೈಗೊಳ್ಳಬೇಕಾಗಿರುವುದರಿಂದ ಆ ಕೆಲಸ ತುಂಬ ಜವಾಬ್ದಾರಿಯುತವಾಗಿ ನಡೆಯಬೇಕಾಗುತ್ತದೆ.
ಪೂರ್ವಸಿದ್ಧತೆ, ಕ್ಷೇತ್ರಕಾರ್ಯ ಮತ್ತು ವಿಶ್ಲೇಷಣೆಗಳು ಸಂಶೋಧನೆಯ ಮೂರು ಹಂತಗಳು. ಪೂರ್ವಸಿದ್ಧತೆಯ ಮೊದಲ ಹೆಜ್ಜೆಯೆಂದರೆ, ಮೂಲವಸ್ತುವಿನ ಬಗೆಗಿನ ಸ್ಪಷ್ಟನೆ. ಅಂದರೆ ಕಾರ್ಯಕರ್ತ ಗೀತೆ. ಕಥೆ, ಗಾಧೆ, ಒಗಟು, ಕಲೆಗಳು, ನಂಬಿಕೆ, ಪದ್ಧತಿ ಮೊದಲಾದ ಜಾನಪದ ಮೂಲವಸ್ತುಗಳಲ್ಲಿ ಯಾವುದರ ಮೇಲೆ ತನಗೆ ಇಷ್ಟವಿದೆಯೋ ಅದನ್ನು ಆರಿಸಿಕೊಳ್ಳಬೇಕಾದುದು. ಉದಾಹರಣೆಗೆ, ಜನಪದ ಕಲೆಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದು, ಗೀತೆಯ ಬಗ್ಗೆಯೋ ಕಥೆಯ ಬಗ್ಗೆಯೊ ಆಸಕ್ತಿಯಿರದಿದ್ದರೆ, ಆಗ ಕಲೆಗಳಷ್ಟು ಉಳಿದವುಗಳು ಯಶಸ್ವಿಯಾಗುವುದಿಲ್ಲ. ನಮ್ಮ ದೃಷ್ಟಿ ಯಾವುದಾದರೂ ಒಂದು ಕ್ಷೇತ್ರಕ್ಕೆ ಕೇಂದ್ರೀಕೃತವಾದರೆ ಕೆಲಸ ಸಮರ್ಪಕವೂ ನಿರ್ದುಷ್ಟವೂ ಆಗುತ್ತದೆ ಆದರೆ, ಹಾಡುವ ಹಾಗೂ ಹೇಳುವ ಸಂಪ್ರದಾಯಗಳು ಬಹುಬೇಗ ನಷ್ಟವಾಗಿ ಬಿಡುವ ಹೆದರಿಕೆಯಿರುವುದರಿಂದ ಸಂಗ್ರಹಕಾರ್ಯ ಯಾವ ಒಂದು ನಿರ್ದಿಷ್ಟ ಕ್ಷೇತ್ರಕ್ಕೇ ಸೇರಿರಬಹುದಾದರೂ ಉಳಿದ ಕ್ಷೇತ್ರಗಳ ಕಡೆಗೂ ಗಮನವಿರಬೇಕಾದುದು ಅಗತ್ಯವೆನಿಸುತ್ತದೆ.

ಪೂರ್ವಭಾವಿಸಿದ್ಧತೆಯ ಮುಂದಿನ ಹೆಜ್ಜೆ, ಜಾನಪದ ಮೂಲ ವಸ್ತುವನ್ನು ಚಾರಿತ್ರಿಕ, ಸಮಾಜಶಾಸ್ತ್ರೀಯ, ಮಾನವಶಾಸ್ತ್ರೇಯ, ಭಾಷಾ ಶಾಸ್ತ್ರೀಯ, ಮನಶ್ಯಾಸ್ತ್ರೀಯ-ಮೊದಲಾದ ವಿವಿಧ ದೃಷ್ಟಿಗಳಿಂದ ನೋಡಬೇಕಾದುದು. ಉದಾಹರಣೆಗೆ, ಐತಿಹ್ಯವನ್ನು ಚಾರಿತ್ರಿಕ ಪುರುಷರ ಹೆಸರುಗಳು ಮತ್ತು ಘಟನೆಗಳು ಇತ್ಯಾದಿಗಳನ್ನು ಸಂಗ್ರಹಿಸಬೇಕಾಗುತ್ತದೆ. ಇದಕ್ಕೂ ಉಳಿದ ಪ್ರಕಾರಗಳಿಗೂ ಸಂಬಂಧವಿದ್ದ ಪಕ್ಷದಲ್ಲಿ, ಆಗ ಅವನ್ನು ಕುರಿತ ಟಿಪ್ಪಣಿಗಳನ್ನು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ಜಾನಪದ ಅಧ್ಯಯನದಲ್ಲಿ ವಿವರಣಾತ್ಮಕ, ತೌಲನಿಕ ಮತ್ತು ರಾಚನಿಕ ಜಾನಪದಗಳೆಂದು ಮೂರು ವಿಧಗಳಿರುವುದರಿಂದ ಸಂಗ್ರಹಕಾರ ಅವುಗಳ ಬಗ್ಗೆಯೂ ನಿಶ್ಚಿತ ಜ್ಞಾನವನ್ನು ಹೊಂದಿರಬೇಕಾಗುತ್ತದೆ.

ಪೂರ್ವಸಿದ್ಧತೆಯ ಮೂರನೆಯ ಹೆಜ್ಜೆಯೆಂದರೆ, ಸಂಗ್ರಹಿಸಬೇಕಾಗಿರುವ ಪ್ರದೇಶದ ಆಯ್ಕೆ. ಎಲ್ಲ ಪ್ರದೇಶಗಳಲ್ಲಿಯೂ ಎಲ್ಲ ಕಾರ್ಯಕರ್ತರೂ ಯಶಸ್ವಿಯಾಗಲಾರರಾದ್ದರಿಂದ, ಕೆಲಸಗಾರ ತನ್ನ ಅನುಕೂಲಕ್ಕೆ ಹೊಂದುವ ನಿರ್ದಿಷ್ಟ ಪ್ರದೇಶವನ್ನು ಆಯ್ದುಕೊಳ್ಳುವುದು ಉತ್ತಮ. ಪ್ರದೇಶ ಗೊತ್ತಿರುವ ವ್ಯಕ್ತಿಗೆ ಸಂಗ್ರಹ ಕಾರ್ಯ ಸುಲಭವಾಗುವಂತೆ, ಅಪರಿಚಿತನಿಗೆ ಸುಲಭವಾಗುವುದಿಲ್ಲ. ಆ ಪ್ರದೇಶದ ಜನರ ಆಚಾರವಿಚಾರ, ಜೀವನರೀತಿ, ಪದ್ಧತಿ, ಗೀತಸಂಪ್ರದಾಯ ಮೊದಲಾದವುಗಳ ಪರಿಚಯವಿರುವವನಾದರೆ ಕಾರ್ಯ ಸುಗಮವಾಗುತ್ತದೆ. ಇನ್ನೊಂದು ವಿಷಯವೆಂದರೆ ಜಾನಪದವನ್ನು ಪ್ರಾದೇಶಿಕವಾಗಿ ನೋಡಬೇಕಾದುದು. ಪ್ರಾದೇಶಿಕ ವಿವಿಧತೆ ಹಾಗೂ ಪ್ರಾದೇಶಿಕ ಏಕತೆಗಳು-ಜಾನಪದದಲ್ಲಿ ಎರಡು ಮುಖ್ಯ ವಿಷಯಗಳು. ಜಾನಪದ ಹರಿದು ಬಂದಿರುವುದು ಪ್ರಾದೇಶಿಕ ಉಪಭಾಷೆಗಳನ್ನು ತಿಳಿದು ಕೊಂಡಿರಬೇಕಾದದ್ದು ಅಗತ್ಯ.
ಪ್ರದೇಶವೊಂದನ್ನು ಆಯ್ದುಕೊಂಡ ಮೇಲೆ, ಅದರ ಹಿನ್ನೆಲೆಯನ್ನೊಮ್ಮೆ ತಿಳಿದಿರಬೇಕಾಗುತ್ತದೆ. ಅಂದರೆ ಜನತೆಯ ಸ್ವಭಾವವನ್ನು ತಿಳಿಯಲು ನೆರವಾಗುವ ವಿಷಯಗಳ ಸಂಗ್ರಹವೇ ಇದು. ಆ ಪ್ರದೇಶದ ಸ್ಥಳೀಯ ಚರಿತ್ರೆ, ಭೌಗೋಳಿಕ ಸಾಮಾಜಿಕ ಪರಿಸ್ಥಿತಿಗಳು ಮೊದಲಾದವನ್ನು ಗಮನಕ್ಕೆ ತಂದು ಕೊಳ್ಳಬೇಕು. ಸಂಗ್ರಹಕಾರ ಹೊರಗಿನವನಾದರಂತೂ ಪೂರ್ವಸಿದ್ಧತೆ ಮಾಡಿಕೊಳ್ಳಲು ತುಂಬ ಪ್ರಯತ್ನ ಪಡಬೇಕಾಗುತ್ತದೆ. ಇಂಥ ಸಮಯದಲ್ಲಿ ವೃದ್ಧ ಜನರನ್ನು ಭೇಟಿ ಮಾಡುವುದರಿಂದಲೋ ಸ್ಥಳೀಯ ಗೆಜೆóಟಿಯರುಗಳನ್ನು ನೋಡುವುದರಿಂದಲೋ ವಿಷಯವನ್ನು ತಿಳಿದುಕೊಳ್ಳಬೇಕಾಗುತ್ತದೆ.

ಮುಂದಿನ ಕಾರ್ಯವೆಂದರೆ ಸಂಗ್ರಹ ಕ್ರಮವೊಂದನ್ನು ಸಿದ್ಧಪಡಿಸಿಕೊಳ್ಳುವುದು. ಇದಿಲ್ಲದೆ ಹೋದರೆ, ವಿಸ್ತಾರ ಜಾನಪದದ ಮುಂದೆ ಭೀತನಾಗಿ ಸಂಗ್ರಹಕಾರ ಬರಿಗೈಲಿ ವಾಪಸಾಗುವ ಸಾಧ್ಯತೆಯಿದೆ. ಸಂಗ್ರಹಕ್ರಮ ಅಧ್ಯಯನದ ವಿಷಯ ಮತ್ತು ವರ್ಗವನ್ನು ಅವಲಂಬಿಸಿರುತ್ತದೆ. ಈಗ ಸಂಗ್ರಹ ರೀತಿಯ ಕೆಲವು ನಿರ್ದೇಶನಗಳನ್ನು ನೋಡಬಹುದು. ಇವನ್ನು ತ್ರಿಲೋಚನ ಪಾಂಡೆಯವರು ಹೀಗೆ ಪಟ್ಟಿ ಮಾಡಿದ್ದಾರೆ:

1 ಎಲ್ಲ ಮೂಲಗಳ ಸ್ವರೂಪಲಕ್ಷಣ, ಸಂದರ್ಶಿಸಿದ ವ್ಯಕ್ತಿಯ ಹಿನ್ನೆಲೆ ಮತ್ತು ವಯಸ್ಸು ಇವುಗಳನ್ನು ಕಾಲ, ಸ್ಥಳ ಮತ್ತು ದಿನಾಂಕಗಳೊಡನೆ ದಾಖಲೆ ಮಾಡಿಕೊಳ್ಳಬೇಕು. ಪ್ರತಿವಕ್ತನ (ಸೂಚಕ) ಹೆಸರು, ವಿಳಾಸ ಮತ್ತು ವೃತ್ತಿಗಳು-ಇವು ಸಂಗ್ರಹಿತ ವಸ್ತುವಿನ ವಿಶ್ವಾಸಾರ್ಹತೆಯನ್ನು ಸಮರ್ಥಿಸುವುದರಲ್ಲಿ ಸಹಾಯ ಮಾಡುತ್ತವೆ.

2 ನಿರ್ದಿಷ್ಟ ಜಾನಪದ ವಿಷಯದ ಶಿರೋನಾಮೆಯನ್ನು ಕಥೆ ಹೇಳುವ ಪ್ರಮುಖ ಸಂದರ್ಭದೊಡನೆ (ಇದ್ದರೆ) ಗುರುತಿಸಬೇಕು.

3 ಜಾನಪದ ವಿಷಯ ಆಯಾ ಕೋಮಿನ ಸ್ತ್ರೀಪುರುಷರಲ್ಲಿ ಯಾರಲ್ಲಿ ಹೆಚ್ಚು ಪ್ರಚಲಿತವಾಗಿದೆ ಎಂಬುದನ್ನು ಗಮನಿಸಬೇಕು. ಇದಲ್ಲದೆ ಅದು ಗುಂಪು ವಿಷಯವೇ ಅಥವಾ ಏಕವಿಷಯವೇ ಎಂಬುದೂ ಸ್ಪಷ್ಟಗೊಳ್ಳಬೇಕು.

4 ಅದೇನಾದರೂ ಗ್ರಂಥ ವಿಷಯವಾದರೆ, ಅದರ ಲೇಖಕನ ಹೆಸರು ಮತ್ತು ರಚನೆಯಾದ ಕಾಲಗಳನ್ನು ಗುರುತಿಸಿಕೊಳ್ಳಬೇಕು.

5 ಜಾನಪದದ ಎಲ್ಲ ವಿಷಯಗಳ ಪ್ರಾರಂಭದಲ್ಲೂ ಸಂಕ್ಷಿಪ್ತ ಪೀಠಿಕೆಗಳಿದ್ದರೆ ಮೂಲವಸ್ತುವಿನ ವರ್ಗೀಕರಣ ಸುಗಮವಾಗುತ್ತದೆ.

6 ಪ್ರಧಾನ ವಿಷಯದ ಜೊತೆಗೆ ಯಾವುದಾದರೂ ಪಕ್ಕದ ವಿಷಯಗಳು (ದಂತ ಕಥೆಗಳು, ಇತ್ಯಾದಿ) ಹೇಳಲ್ಪಟ್ಟಿದ್ದರೆ, ಅವನ್ನೂ ಗುರುತಿಸಿಕೊಳ್ಳಬೇಕು.

7 ಜನಪದ ಸಂಗೀತದ ಭಿನ್ನ ಉಪಕರಣಗಳ ಹೆಸರುಗಳನ್ನು ಗುರುತು ಹಾಕಿಕೊಳ್ಳಬೇಕು. ಗೀತೆ ಇತ್ಯಾದಿಗಳಿಗೆ ಏನಾದರೂ ಹಿಮ್ಮೇಳದ ಅಗತ್ಯವಿಲ್ಲದಿದ್ದರೆ ಇಲ್ಲವೆನ್ನುವುದನ್ನೂ ಗುರುತಿಸಬೇಕು.

8 ವಿಷಯದ ಭಾಷೆಯಲ್ಲಿ ವ್ಯತ್ಯಾಸ ಮಾಡಲಾಗದು. ವಿಷಯದ ಪದಗಳು, ಜಾಣ್ನುಡಿಗಳು ಇದ್ದಹಾಗೆಯೇ ಉಳಿಸಬೇಕು.

9 ಸಂದರ್ಶಿಸುವ ಜನರೊಡನೆ ಸ್ನೇಹದಿಂದ ವರ್ತಿಸುವುದು ಯಾವಾಗಲೂ ಅನುಕೂಲಕರ ಫಲಿತಾಂಶಗಳನ್ನು ತರುತ್ತದೆ.
ಸಂಗ್ರಹಕಾರನಿಗೆ ಕೆಲವು ಅತ್ಯಗತ್ಯ ಸಾಧನೆಗಳು ಬೇಕಾಗುತ್ತವೆ. ಅವುಗಳಲ್ಲಿ ನಮ್ಮ ಮೊದಲ ಗಮನಕ್ಕೆ ಬರುವುದೆಂದರೆ ಟೇಪ್ ರೆಕಾರ್ಡರ್. ಸಂಗ್ರಹ ವೈಜ್ಞಾನಿಕವಾಗಿರಲು ಇದು ಅತ್ಯಂತ ಅವಶ್ಯಕ. ಇದು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಬಹುದಾದ ಗಾತ್ರದಲ್ಲಿ ಸಿಗುತ್ತದೆ. ಇದನ್ನು ಬಳಸುವುದರಿಂದ ನಮ್ಮ ಶ್ರಮವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ಪ್ರತಿವಕ್ತನ ಹತ್ತಿರ ಎದುರಿಸಬೇಕಾಗಿರುವ ಎಷ್ಟೋ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಸಂಗ್ರಹಕ್ಕೆ ತೆಗೆದುಕೊಂಡು ಹೋಗಬೇಕಾದ ಮತ್ತೊಂದು ಸಾಧನ ಕ್ಯಾಮರಾ. ಪ್ರತಿವಕ್ತನ ಚಿತ್ರ ಅಥವಾ ಸಂಗ್ರಹ ಮಾಡುವಾಗಿನ ದೃಶ್ಯವನ್ನು ಚಿತ್ರಿಸಿಕೊಳ್ಳುವುದಕ್ಕೆ ಇದು ಬೇಕಾಗುವುದುಂಟು. ಜನಪದ ಕಲೆಗಳ ಸಂಗ್ರಹದಲ್ಲಂತೂ ಇದರ ಅಗತ್ಯ ಬಹಳವಿದೆ.
ಕಾರ್ಯಕರ್ತ ಸಿದ್ಧಪಡಿಸಿಕೊಳ್ಳಬೇಕಾದ ಪೂರ್ವಸಿದ್ಧ ಪ್ರಶ್ನಾವಳಿಯಲ್ಲಿ ವಿಧಗಳಿವೆ: ಕ್ಷೇತ್ರಕಾರ್ಯದ ಪೂರ್ವಸಿದ್ಧತೆಗೆ ಸಂಬಂಧಿಸಿದುದು ಒಂದು; ಪ್ರತಿವಕ್ತನಿಗೆ ಸಂಬಂಧಿಸಿದುದು ಮತ್ತೊಂದು. ಮೊದಲನೆಯದಕ್ಕಿಂತ ಎರಡನೆಯದು ಭಿನ್ನವಾಗಿರುತ್ತದೆಯಲ್ಲದೆ ಸಂಗ್ರಹಕಾರ್ಯ ಅದರ ಮೇಲೇ ರೂಪಿತವಾಗಬೇಕಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಸಿದ್ಧಪಡಿಸಿಕೊಂಡಿರುವ ಪ್ರಶ್ನಾವಳಿ ಅನ್ವಯಿಸದೇ ಹೋಗಬಹುದು. ಇಂಥ ಕಡೆಗಳಲ್ಲಿ ಹಳೆಯದಕ್ಕೆ ಇನ್ನೂ ಕೆಲವು ವಿಷಯಗಳನ್ನು ಸೇರಿಸಬೇಕಾಗುತ್ತದೆ. ಇದಲ್ಲದೆ ಅಧ್ಯಯನ ಹೆಚ್ಚಾಗಿ ನಡೆದಿರದ ಗಿರಿಜನ ಸಮಾಜಗಳಿಗಾಗಿ ಹೊಸ ಪ್ರಶ್ನಾವಳಿಯನ್ನೇ ರೂಪಿಸಬೇಕಾಗಿ ಬರಬಹುದು. ಆದ್ದರಿಂದ, ಕ್ಷೇತ್ರಕಾರ್ಯವನ್ನು ಒಂದೇ ರೀತಿಯ ಪ್ರಶ್ನಾವಳಿಯ ಆಧಾರದ ಮೇಲೆ ನಿರ್ವಹಿಸಲು ಸಾಧ್ಯವಾಗುವುದಿಲ್ಲ.

ಸಂಗ್ರಹ ಕಾರ್ಯದಲ್ಲಿ ನಿವೃತ ಪದ್ಧತಿ ಮತ್ತು ಸಂವೃತ ಪದ್ಧತಿ ಎಂಬುದಾಗಿ ಎರಡು ರೀತಿಗಳಿವೆ. ಪತ್ರವ್ಯವಹಾರದ ಮೂಲಕ ವಿಷಯಗಳನ್ನು ಸಂಗ್ರಹಿಸುವುದು ವಿವೃತ ಪದ್ಧತಿ; ಜನರನ್ನು ನೇರವಾಗಿ ಸಂಧಿಸಿ ಮೂಲವಸ್ತುವನ್ನು ಸಂಗ್ರಹಿಸುವುದು ಸಂವೃತ ಪದ್ಧತಿ. ಸಂಶೋಧನೆಯ ವಿಷಯಕ್ಕೆ ಅನುಗುಣವಾಗಿ ಕ್ಷೇತ್ರಕಾರ್ಯದ ವಿಧಾನಗಳು ವ್ಯತ್ಯಾಸವಾಗುತ್ತವೆ. ಕ್ಷೇತ್ರಕಾರ್ಯದಲ್ಲಿ ಪ್ರೀತಿ ವಿಶ್ವಾಸವಿಲ್ಲದಿದ್ದ ಪಕ್ಷದಲ್ಲಿ ಕ್ಷೇತ್ರಾಭ್ಯಾಸಕ್ಕೆ ಕಾರ್ಯಕರ್ತ ಒಪ್ಪಿಕೊಳ್ಳಬಾರದು. ಕ್ಷೇತ್ರಕಾರ್ಯಕ್ಕೆ ಒಬ್ಬನೇ ಹೋದರೆ ಅದೊಂದು ವೈಯಕ್ತಿಕ ಚಟುವಟಿಕೆಯಾಗುತ್ತದೆ; ಆಗ ಅದು ಅವನ ಬುದ್ಧಿವಂತಿಕೆ ಮತ್ತು ಜಾಣ್ಮೆಯನ್ನು ಅವಲಂಬಿಸಿರುತ್ತದೆ. ನಾಲ್ಕು ಜನ ಸೇರಿ ಹೊರಟಾಗ ದೊಡ್ಡ ಯೋಜನೆಯನ್ನೇ ಹಾಕಬೇಕಾಗುತ್ತದೆ. ಸಂಗ್ರಹಕಾರ ಹಳ್ಳಿಗರ ಜೀವನದಲ್ಲಿ ಬೆರೆತುಹೋಗಬೇಕಾದುದು ಗಮನದಲ್ಲಿರಿಸಬೇಕಾದ ಒಂದು ಸಂಗತಿ. ಪುರಾತನ ಸಮಾಜಗಳಿಗೆ ಹೋದಾಗಲಂತು ತುಂಬ ಎಚ್ಚರಿಕೆಯಿಂದಿರಬೇಕಾಗುತ್ತದೆ. ಸಂಶೋಧಕರು ತಮಗೆ ಕೆಟ್ಟದ್ದನ್ನು ಮಾಡುವುದಕ್ಕೆ ಬಂದಿರುವರೆಂದು ಜನ ತಿಳಿದುಕೊಂಡರೆ ಯಾವ ಸಹಕಾರವೂ ಅವರಿಂದ ಸಿಗದೆ ಹೋಗಬಹುದು. ಸಂಗ್ರಹಕಾರನಿಗಿರಬೇಕಾದ ಮತ್ತೊಂದು ಗುಣ ಸಹನೆ. ಎಷ್ಟೋ ಸಾರಿ ಆತ ಬೆಳಗ್ಗೆಯಿಂದ ಸಾಯಂಕಾಲದವರೆವಿಗೂ ಕಾಯಬೇಕಾಗಿ ಬರಬಹುದು. ಮೊದಮೊದಲು ನಿರೀಕ್ಷಿಸಿದಂತೆ ಕಾರ್ಯ ಸುಗಮವಾಗಿ ಆಗದಿರಬಹುದು. ಕೆಲವು ವೇಳೆ ಕೆಲಸ  ಆಗದೇ ಹೋಗುವುದೂ ಉಂಟು. ಇಂಥ ಸಮಯಗಳಲ್ಲಿ ಸಂಗ್ರಹಕಾರ ಬಹು ಜಾಣ್ಮೆಯಿಂದ ವರ್ತಿಸಬೇಕಾಗುತ್ತದೆ.

ಇಷ್ಟೆಲ್ಲ ಸಿದ್ಧತೆಯೊಡನೆ ಬಂದ ಸಂಗ್ರಹಕಾರರು ಸ್ಥಳೀಯ ಪಂಚಾಯಿತಗಳು, ಪುರೋಹಿತರು, ಸಾಮಾಜಿಕ ಮುಂದಾಳುಗಳು, ಸಾಂಸ್ಕøತಿಕ ಹಾಗೂ ರಾಜಕೀಯ ಸಂಸ್ಥೆಗಳು ಮೊದಲಾದವುಗಳ ಸಂಪರ್ಕ ಬೆಳೆಸಿಕೊಂಡರೆ, ಕ್ಷೇತ್ರಕಾರ್ಯಕ್ಕೆ ದಾರಿ ಸುಲಭವಾದಂತಾಗುತ್ತದೆ. ಸರಿಯಾದ ಪ್ರತಿವಕ್ತ ಸಿಕ್ಕಿದರೆ ಅರ್ಧ ಕೆಲಸ ಆದಂತೆಯೇ. ಕೆಲವು ಸಾರಿ ಅನಿರೀಕ್ಷಿತವಾಗಿ ಕೆಲವು ವ್ಯಕ್ತಿಗಳು ಸಂಪರ್ಕ ರಾಯಭಾರಿಗಳಾಗಿ ಕೆಲಸ ಮಾಡಲು ಬರುವುದುಂಟು. ಅಂಥವರಲ್ಲಿ ಪ್ರತಿಯೊಬ್ಬನನ್ನೂ ಎಚ್ಚರಿಕೆಯಿಂದ ಗಮನಿಸುವುದು ಒಳ್ಳೆಯದು.

ಸಂಗ್ರಹಕಾರನಿಗೆ ಪ್ರತಿವಕ್ತ ಸಿಕ್ಕಿದಾಗ, ಜಾನಪದ ನಿನಗೆ ಗೊತ್ತೆ, ಯಾವುದಾದರೂ ಜಾನಪದವನ್ನು ಬಲ್ಲ ಯಾರಾದರೂ ನಿನಗೆ ಗೊತ್ತೆ-ಮೊದಲಾದ ಪ್ರಶ್ನೆಗಳನ್ನು ಕೇಳುವುದು ಅಸಂಗತವಾಗುತ್ತದೆ. ಕಾರಣ, ಪ್ರತಿವಕ್ತನಿಗೆ ತಾನು ತಿಳಿದುಕೊಂಡಿರುವ ಜಾನಪದದ ಬಗ್ಗೆ ಪ್ರಜ್ಞೆ ಇರುವುದಿಲ್ಲ. ಆದ್ದರಿಂದ ಗೀತೆಯನ್ನೂ ಕಥೆಯನ್ನೂ ಕುರಿತ ನಿರ್ದಿಷ್ಟ ಪ್ರಶ್ನೆಗಳನ್ನು ಕೇಳುವುದು ಉಚಿತವೆಂದು ತೋರುತ್ತದೆ. ಇದಲ್ಲದೆ ಪ್ರತಿವಕ್ತನಿಗೆ ಗೌರವಪೂರ್ಣ ಪುರಸ್ಕಾರ, ಶ್ಲಾಘನೆಗಳನ್ನು ನೀಡಬೇಕಾಗುತ್ತದೆ. ಜಾನಪದವನ್ನು ಸಂಗ್ರಹಿಸುವ ಉದ್ದೇಶವನ್ನು ಅವನಿಗೆ ಹೇಳಬೇಕಾಗುತ್ತದೆ. ಅವನ ಹೆಸರನ್ನು ಜೊತೆಯಲ್ಲಿ ಪ್ರಕಟಿಸುತ್ತೇವೆಂದು ಅದು ರಾಷ್ಟ್ರೀಯ ವ್ಯಾಪ್ತಿಯ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತದೆಂದೂ ಅವನು ಹೇಳಿಕೊಟ್ಟ ಗೀತೆ, ಕಥೆ, ಐತಿಹ್ಯ, ಮೊದಲಾದವನ್ನು ವಿದ್ವಾಂಸರು ಅಧ್ಯಯನ ಮಾಡುತ್ತಾರೆಂದೂ ತಿಳಿಸಬೇಕಾಗುತ್ತದೆ. ಇದೆಲ್ಲವನ್ನೂ ಕೇಳಿದರೆ ಅವನಿಗೆ ಒಂದು ರೀತಿಯ ಹೆಮ್ಮೆ ಉಂಟಾಗುತ್ತದೆ. ಸಂಗ್ರಹಕಾರ್ಯ ಸುಲಭವಾಗಲು ಇದೂ ಒಂದು ಮುಖ್ಯ ಸಲಕರಣೆಯಾಗುತ್ತದೆ.
ಸಂಗ್ರಹಕಾರ ಪ್ರತಿವಕ್ತನ ಬಗ್ಗೆ ಕೆಲಮಟ್ಟಿಗಾದರೂ ತಿಳಿದುಕೊಳ್ಳದೆ, ವಿಶ್ವಾಸವನ್ನು ಖಚಿತಪಡಿಸಿಕೊಳ್ಳದೆ, ಅವನು ಹೇಳುವುದನ್ನು ಬರೆದುಕೊಳ್ಳಲು ಪ್ರಾರಂಭಿಸಬಾರದು. ಸಂಗ್ರಹಿಸುವಾಗ ಪದಗಳೊ ನುಡಿಗಟ್ಟುಗಳೊ ಅರ್ಥವಾಗದೆ ಹೋದರೆ, ತಪ್ಪು ಕಲ್ಪನೆಗೆ ಎಡೆಕೊಡುವಂತಿದ್ದರೆ, ಅವನ್ನು ಮತ್ತೆ ಅವನಿಂದ ವಿಚಾರಿಸಿ ದಾಖಲಿಸಿಕೊಳ್ಳಬೇಕು. ಸಿಕ್ಕಿದ್ದೆಲ್ಲವನ್ನೂ ಸಂಗ್ರಹಿಸಿ ಮನೆಗೆ ಬಂದ ಮೇಲೆ ಅನುಕ್ರಮವಾಗಿ ಜೋಡಿಸಿಕೊಂಡರಾಯಿತು ಎಂಬ ಸಿದ್ಧಸೂತ್ರವೊಂದಿದೆ. ಸಂಗ್ರಹ ಕಾರ್ಯಕ್ಕೆ ಆಗತಾನೆ ಪ್ರವೇಶ ಮಾಡುವವರಿಗೆ ಇದು ಸರಿಯೆನಿಸಿದರೂ ಪ್ರತಿಭಾವಂತನಿಗೆ ಇದು ಕೇವಲ ಕಾಲವ್ಯಯ ಎನಿಸುತ್ತದೆ. ಇದಲ್ಲದೆ, ಅಶ್ಲೀಲವಿಷಯ ಬಂದಾಗ ಸಂಗ್ರಹಕಾರ ತುಂಬ ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ.
ಸಂಗ್ರಾಹಕ ತಾನು ಕೇಳಿದ್ದನ್ನು ಮಾತ್ರ ಸಂಗ್ರಹಿಸಿಕೊಳ್ಳಬೇಕು. ಆ ಮೂಲಕ ಸಂಗ್ರಹಕ್ಕೆ ಪ್ರಾಮಾಣಿಕನಾಗಿರಬೇಕು. ಹೀಗೆ ಸಂಗ್ರಹಿಸುವಾಗ ಪ್ರತಿವಕ್ತನನ್ನು ಕುರಿತು ಇದೇನು, ಅದೇನು, ಇದರ ಬಗ್ಗೆ ನಿನಗೇನು ಗೊತ್ತು ಎಂದು ಮೊದಲಾದ ಪ್ರಶ್ನೆಗಳನ್ನು ಕೇಳಬೇಕು. ಹೀಗೆ ಕೇಳಿದಾಗಲೂ ವಿಷಯ ಸ್ಪಷ್ಟವಾಗದೆ ಉಳಿದರೆ ಸಂಗ್ರಾಹಕ ಆಗ ಸ್ಥೂಲ ವಸ್ತುವಿನ ಸಹಾಯವನ್ನು ಅವಲಂಬಿಸಬೇಕಾಗುತ್ತದೆ. ಯಾವುದಾದರೂ ವಸ್ತುವಿನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಆ ವಸ್ತುವನ್ನು ತೋರಿಸುವುದರ ಮೂಲಕವೋ ಅದಕ್ಕೆ ಸಂವಾದಿ ವಸ್ತುವನ್ನು ನೆನಪಿದೆ ಕೊಡುವುದರ ಮೂಲಕವೋ ಮೂಲವಸ್ತುವಿನ ವಿಚಾರವನ್ನು ಸಂಗ್ರಹಿಸಬೇಕಾಗುತ್ತದೆ.

ಜಾನಪದ ಮೂಲವಸ್ತುವನ್ನು ಬರೆದುಕೊಂಡು ಅಥವಾ ಟೇಪ್‍ರೆಕಾರ್ಡ್ ಮಾಡಿಕೊಂಡು ಸಂಗ್ರಹಿಸಬಹುದು. ಎರಡನೆಯದು ಹೆಚ್ಚು ವೈಜ್ಞಾನಿಕ. ಕೆಲವರು ರಿಕಾರ್ಡ್‍ರಿಗೆ ಮುಖ ಕೊಡಲು ನಾಚಬಹುದು. ಇಂಥ ಸಮಯಗಳಲ್ಲಿ ಸಂಗ್ರಾಹಕನಿಗೆ ತಾಳ್ಮೆಯಿರಬೇಕು. ರೆಕಾರ್ಡಿನ ಸಾಧನಗಳನ್ನು ಪರಿಚಯಿಸುತ್ತ, ರೆಕಾರ್ಡ್ ಮಾಡಿರುವ ಭಾಗಗಳನ್ನು ಹಾಕಿ ರಂಜಿಸಿ, ಯಂತ್ರದ ಬಗ್ಗೆ ಮಾತಾಡುತ್ತ, ಆಸಕ್ತಿಯನ್ನು ಕೆರಳಿಸುತ್ತ, ಪ್ರತಿವಕ್ತನಲ್ಲಿರುವ ನಾಚಿಕೆಯನ್ನೂ ಹೆದರಿಕೆಯನ್ನೂ ಹೋಗಲಾಡಿಸಬಹುದು. ಆಮೇಲೆ ಸಂಗ್ರಹ ಸುಲಭವಾಗುತ್ತದೆ. 

ಸಂಗ್ರಹಕಾರ ಮೂಲವಸ್ತುವನ್ನು ರೆಕಾರ್ಡ್ ಮಾಡಿಕೊಳ್ಳುವುದರ ಜೊತೆಯಲ್ಲಿ ಭಿನ್ನ ಮತಾಚರಣೆಗಳು, ಋತುಮಾನಗಳು ಹಬ್ಬಗಳು ಮೊದಲಾದವನ್ನೂ ಸಂಗ್ರಹಿಸಬೇಕಾಗುತ್ತದೆ. ಜಾತ್ರೆಗಳ, ಪದ್ಧತಿಗಳ, ನಡಾವಳಿಗಳ ಪ್ರಾತಿನಿಧಿಕ ಲಕ್ಷಣಗಳ ಅನ್ವೇಷಣೆ ಅಗತ್ಯವಾಗಬಹುದು. ಗ್ರಾಮದ ಗಮನಾರ್ಹ ವ್ಯಕ್ತಿಗಳ ಹಾಗೂ ಆಗಿ ಹೋದವರ ಜೀವನ ಚರಿತ್ರೆಗೆ ಸಂಬಂಧಿಸಿದ ಕಥೆ ಮುಂತಾದ ವಿಷಯಗಳನ್ನು, ಸಾಮಾನ್ಯ ಜನರ ಜೀವನ ರೀತಿಗಳನ್ನು, ಹಿಂದೆ ಆಗಿಹೋದ ಘಟನೆಗಳನ್ನು ಮತ್ತು ತಾವು ಸಂಧಿಸಿದ ಗಮನಾರ್ಹ ವ್ಯಕ್ತಿಗಳನ್ನು ಕುರಿತು ವೃದ್ಧ ಸ್ತ್ರೀಪುರುಷರು ಹೇಳುವ ಸ್ಮರಣೆಗಳನ್ನು ಸಂಗ್ರಹಿಸಬೇಕಾದದ್ದು ಅಗತ್ಯ. ಅನೇಕ ವೇಳೆ ಚಾರಿತ್ರಿಕ ಸ್ಮøತಿಗಳು ಜಾನಪದ ವೇಷಧರಿಸಿ ಬಂದುಬಿಡುವುದುಂಟು. ಸಂಗ್ರಾಹಕ ಜಾನಪದಕ್ಕೂ ಸ್ಥಳೀಯ ಇತಿಹಾಸಕ್ಕೂ ಗೊಂದಲವುಂಟಾಗದಂತೆ ನೋಡಿಕೊಳ್ಳಬೇಕು.
ಸಂಗ್ರಹಕಾರ ಕೇವಲ ಗೀತೆ, ಕಥೆ ಮೊದಲಾದವುಗಳೊಡನೆ ಮಾತೃಕೆಯನ್ನೂ ಸಂಗ್ರಹಿಸಬೇಕಾಗುತ್ತದೆ. ಜನಪದ ಸಂಸ್ಕøತಿಯ ಪ್ರತಿಯೊಂದು ಅಂಶವೂ ಅದರ ಮಾತೃಕೆಯಿಂದ ವ್ಯವಸ್ಥಿತವಾಗುತ್ತದೆ; ಅದರಿಂದ ಬೆಳೆಯುತ್ತಿರುತ್ತದೆ. ಇದಲ್ಲದೆ ಪ್ರತಿ ವಾಚಿಕ ವಿಷಯವೂ ಸಾಂಸ್ಕøತಿಕ ಮಾತೃಕೆಯಿಂದ ಪೋಷಿತವಾಗಿರುವುದಲ್ಲದೆ, ನೆರೆಹೊರೆಯ ಪ್ರದೇಶದಿಂದಲೂ ಪ್ರಭಾವಿತವಾಗಿರುವ ಸಾಧ್ಯತೆಯಿರುತ್ತದೆ. ಸಂಗ್ರಹಕಾರ ಈ ಪ್ರಭಾವಗಳನ್ನು ಸ್ವೀಕರಣಗಳನ್ನು ಕಂಡುಹಿಡಿಯಲು ತನ್ನ ಪ್ರದೇಶವನ್ನು ನೆರೆಹೊರೆಯನ್ನು ಚೆನ್ನಾಗಿ ಅರಿತಿರಬೇಕಾಗುತ್ತದೆ. ಮಾತೃಕೆಯನ್ನು ಸಂಗ್ರಹಿಸುವಾಗ ಪ್ರತಿವಕ್ತವನ್ನು, ಈ ಕಥೆ ಗೀತೆ ನಿನಗೆ ಏನು ಅರ್ಥಕೊಡುತ್ತದೆ, ಯಾತಕ್ಕಾಗಿ ನೀನು ಈ ಗೀತೆಯನ್ನು ಹಾಡುತ್ತೀಯೆ, ಈ ಕಥೆಯಲ್ಲಿ ಈ ಪಾತ್ರ ಹೀಗೆ ಏಕೆ ವರ್ತಿಸುತ್ತದೆ-ಎಂದು ಮುಂತಾದ ಪ್ರಶ್ನೆಗಳನ್ನು ಕೇಳುವುದರ ಮೂಲಕ ಅವನಿಂದ ವಿವರಣೆಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಇದಲ್ಲದೆ ಪ್ರತಿ ಕಥೆ ಅಥವಾ ಗೀತೆಯಲ್ಲಿ ಹಲವಾರು ಪ್ರತಿವಕ್ತರಿಂದ ಬೇರೆ ಬೇರೆ ಕಾಲಗಳಲ್ಲಿ ರೆಕಾರ್ಡ್ ಮಾಡಿಕೊಳ್ಳಬೇಕು. ಪಠ್ಯದ ವ್ಯತ್ಯಯಗಳನ್ನು ಗುರುತಿಸುವಾಗ ಇದು ನೆರವಾಗುತ್ತದೆ.

ಸಂಗ್ರಹಕಾರ ಹಾಡುಗಾರರನನ್ನು ಕಥಾವಕ್ತೈಗಳನ್ನು ಕಲೆ ಹಾಕಬೇಕು. ಎಲ್ಲ ಸಂಸ್ಕøತಿಗಳಲ್ಲೂ ಇಂಥ ಜನರು ಸಿಗುತ್ತಾರೆ. ಕೆಲವರಿಗೆ ಹಾಡುವುದು, ಹೇಳುವುದು ಚೆನ್ನಾಗಿ ಬರದಿದ್ದರೂ ಜನಪದ ಸಂಸ್ಕøತಿಯನ್ನು ಕುರಿತು ಕೆಲವು ವಿಷಯಗಳನ್ನು ತಿಳಿಸಬಲ್ಲವರಾಗಿರುತ್ತಾರೆ. ಪ್ರತಿ ಸಮಾಜದಲ್ಲೂ ಸಿಕ್ಕುವ ವೃತ್ತಿಕಲಾವಿದರಿಂದಲೂ ಎಷ್ಟೋ ಉಪಯುಕ್ತ ವಿಷಯಗಳು ದೊರಕುತ್ತವೆ.

ಸಾಮಾನ್ಯವಾಗಿ ಪ್ರತಿವಕ್ತರನ್ನು, ಅವರು ಇವನ್ನು ಎಲ್ಲಿ ಪಡೆದರು, ಅವುಗಳಿಗೇಕೆ ಅಂಟಿಕೊಂಡಿದ್ದಾರೆ, ಅದು ಅವರ ಕೌಟುಂಬಿಕ ಸಂಪ್ರದಾಯವೇನಾದರೂ ಆಗಿದೆಯೇ ಯಾವುದನ್ನಾದರೂ ಬುದ್ಧಿಪೂರ್ವಕವಾಗಿ ವ್ಯತ್ಯಾಸ ಮಾಡಿಕೊಳ್ಳುತ್ತಾರೆಯೇ-ಮುಂತಾದ ಪ್ರಶ್ನೆಗಳನ್ನು ಹಾಕಿ ವಿಷಯಗಳನ್ನು ಸಂಗ್ರಹಿಸಬೇಕಾಗುತ್ತದೆ. ಇದಲ್ಲದೆ ಸಂಗ್ರಹಕಾರರು ಪ್ರತಿವಕ್ತರ ಜೀವನ ವಿಷಯಗಳನ್ನು ಬರೆದಿಟ್ಟುಕೊಳ್ಳಬೇಕಾಗುತ್ತದೆ. ಅವರ ಜೀವನ ಕ್ರಮ, ಕಾರ್ಯ ಸಾಧನೆಯ ಚರಿತ್ರೆ, ಕಲೆಯ ಬಗ್ಗೆ ಅವರ ವಿಮರ್ಶೆ ಇವೆಲ್ಲ ಜಾನಪದ ವಿಶ್ಲೇóಷಣೆಗೆ ಸಹಾಯ ಮಾಡುತ್ತವೆ.
ಜಾನಪದವನ್ನು ಹೀಗೆ ಸಂಗ್ರಹಿಸಿಕೊಂಡು ಬಂದಮೇಲೆ ಕಥೆ, ಐತಿಹ್ಯ, ಗೀತೆ, ಪುರಾಣ ಇತ್ಯಾದಿ ವಿವಿಧ ಮೂಲವಸ್ತುಗಳ ರೀತಿರೂಪಗಳನ್ನು ಗುರುತಿಸಬೇಕು. ಇದಾದ ಮೇಲೆ ವಿಶೇಷ ಕಾರ್ಡೊಂದರಲ್ಲಿ ವರ್ಗೀಕರಣ ಮತ್ತು ಸೂಚಿಗಳ ತಯಾರಿಕೆಯಾಗಬೇಕಾಗುತ್ತದೆ. ಸಂಗ್ರಹಿತ ಮೂಲವಸ್ತುಗಳನ್ನು ಆಕಾರಾದಿಯಾಗಿ ಸೂಚಿಸಲು ಐದು ಸೂಚಿ ನಿರ್ದೇಶನ ಕಾರ್ಡುಗಳು ಬೇಕಾಗುತ್ತವೆ. ಸಂಗ್ರಾಹಕರು, ಉಗಮ ಹೊಂದಿದ ಸಮಾಜ ಅಥವಾ ಕೋಮು ಮತ್ತು ದೇಶಗಳು, ಕಥೆಯೊಳಗೆ ಬರುವ ನಾಯಕರು, ಪ್ರತಿವಕ್ತರು, ಭಾಷೆ-ಈ ವಸ್ತುಸೂಚಿಗಳನ್ನು ವರ್ಗಸೂಚಿ ಮತ್ತು ಆಶಯಸೂಚಿಗಳೆಂಬುದಾಗಿ ಎರಡು ಗುಂಪುಗಳಾಗಿ ವಿಂಗಡಿಸಿಕೊಳ್ಳಬಹುದು.

ಜಾನಪದವೂ ಮಾನವಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ಮನಶ್ಯಾಸ್ತ್ರ, ಭಾಷಾಶಾಸ್ತ್ರ ಮೊದಲಾದುವುಗಳಂತೆ ಪ್ರಾಮಾಣಿಕ ವಿಜ್ಞಾನವಾದುದರಿಂದ, ಪರಂಪರಾಗತವಾದ ವಾಙ್ಮಯವನ್ನು ಅರ್ಥೈಸಲು ಸೈದ್ಧಾಂತಿಕ ಪ್ರಸ್ತಾಪ ಕೂಡ ಬೇಕಾಗುತ್ತದೆಂದು ತೋರುತ್ತದೆ. ಇದಕ್ಕಾಗಿ ಸಂಶೋಧಕನಿಗೆ ಪೂರ್ವ ಶಿಕ್ಷಣ ಬೇಕಾಗುತ್ತದೆ. ಇದರಲ್ಲಿ ಪುಸ್ತಕ ಭಂಡಾರ ಸಾಧನಗಳು ಮತ್ತು ಆಧಾರ ಗ್ರಂಥಗಳನ್ನು ಉಪಯೋಗಿಸಿ ಕೊಳ್ಳುವುದು, ವ್ಯವಸ್ಥಿತ ಕ್ಷೇತ್ರ ಸಂಗ್ರಹದ ಉಸ್ತುವಾರಿ, ವಿಶಾಲವಾದ ಓದು ಹಾಗೂ ಆಲೋಚನೆ ಮತ್ತು ಸಂಶೋಧನೆಯಲ್ಲಿ ಉದಯವಾದ ಸಮಸ್ಯೆಗಳಿಗೆ ವಿವೇಕದ ಪ್ರಸ್ತಾಪ-ಇವುಗಳೆಲ್ಲ ಒಳಗೊಂಡಿರುತ್ತವೆ.
ಜಾನಪದ ಕ್ಷೇತ್ರಕಾರ್ಯ ಯಾವುದೋ ಒಂದು ಹಂತದಲ್ಲಿ ಭಾಷೆಯ ಬಗೆಗಿನ ವಿವೇಚನೆಗೂ ನೆರವಾಗುತ್ತದಾದ್ದರಿಂದ ಜಾನಪದ ಸಂಶೋಧಕ ಭಾಷಾವಿಜ್ಞಾನದ ಕ್ಷೇತ್ರಕಾರ್ಯದ ಬಗೆಗೂ ಸ್ವಲ್ಪ ತಿಳಿದಿರುವುದು ಒಳ್ಳೆಯದು.
(ನೋಡಿ- ಕ್ಷೇತ್ರಕಾರ್ಯ-(ಭಾಷಾವಿಜ್ಞಾನ))																					 (ಆರ್.ಜಿ.)